ವೆಂಕಟ ರಂಗೋ ಕಟ್ಟಿ 1833-1909. ಸಮಾಜಸುಧಾರಕ, ಪತ್ರಿಕೋದ್ಯಮಿ ಹಾಗೂ ಶಿಕ್ಷಕರು. ಹುಟ್ಟಿದ್ದು ಬಿಜಾಪುರ ಜಿಲ್ಲೆಯ ಮುಧೋಳದಲ್ಲಿ; 
ಮನೆಯಲ್ಲಿಯೇ ಸಂಸ್ಕøತ ಕಾವ್ಯಶಾಸ್ತ್ರಗಳನ್ನು ಓದಿಕೊಂಡ ಇವರು ಪುಣೆಗೆ ಹೋಗಿ ಇಂಗ್ಲಿಷ್ ಶಿಕ್ಷಣವನ್ನು ಪಡೆದು ಅಲ್ಲಿಯ ಟ್ರೈನಿಂಗ್ ಕಾಲೇಜೊಂದರಲ್ಲಿ ಸುಮಾರು 10 ವರ್ಷಗಳ ಕಾಲ ಅಧ್ಯಾಪಕರಾಗಿದ್ದರು. ಅನಂತರ ಬೆಳಗಾಂವಿಯ ನಾರ್ಮಲ್ ಸ್ಕೂಲಿನಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದರು. ಮುಂದೆ ಧಾರವಾಡದ ಟ್ರೈನಿಂಗ್ ಕಾಲೇಜಿನ ಅಧ್ಯಾಪಕ ವರ್ಗಕ್ಕೆ ಸೇರಿದ ಇವರು, ಆ ಕಾಲೇಜಿನ ಪ್ರಿನ್ಸಿಪಾಲರಾಗಿ 14 ವರ್ಷಗಳ ಕಾಲ (1876-90) ಕೆಲಸ ಮಾಡಿ ನಿವೃತ್ತರಾದರು.

	ಪುಣೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ, ಅಲ್ಲಿ ನಡೆಯುತ್ತಿದ್ದ ಭಾಷಾಭಿವೃದ್ಧಿಗೆ ಸಂಬಂಧಿಸಿದ ಚಟುವಟಿಕೆಗಳಿಂದ ಇವರು ಪ್ರಭಾವಿತರಾ ಗಿದ್ದರು. ಉತ್ತರ ಕರ್ನಾಟಕದಲ್ಲಿ ಕನ್ನಡದ ಸ್ಥಾನಮಾನಗಳಿಗಾಗಿ ತಮ್ಮ ಜೀವನದ ಕೊನೆಯವರೆಗೂ ಹಲವು ಬಗೆಯಲ್ಲಿ ದುಡಿದರು; ಸ್ವತಃ ಲೇಖಕರೂ ಆಗಿದ್ದ ಇವರು ಶಾಲಾ ವಿದ್ಯಾರ್ಥಿಗಳಿಗೆಂದು ಬರೆದ ಕನ್ನಡ ಕ್ರಮಿಕ ಪುಸ್ತಕಗಳು ತುಂಬ ಜನಪ್ರಿಯವಾಗಿದ್ದವು. ಇವರು ಬರೆದ ಇತರ ಮುಖ್ಯ ಕೃತಿಗಳಿವು: ಜ್ಯೋತಿಷಶಾಸ್ತ್ರ, ಪದಾರ್ಥ ವಿಜ್ಞಾನ ಶಾಸ್ತ್ರ, ವನಸ್ಪತಿಶಾಸ್ತ್ರ, ಖನಿಜಶಾಸ್ತ್ರ, ಲಘುವ್ಯಾಕರಣ, ಕರ್ನಾಟಕದ ವರ್ಣನೆಯೂ ಇತಿಹಾಸವೂ, ಕರ್ನಾಟಕ ಗೆಜೆಟ್ಟಿಯರು (ಭಾಷಾಂತರ).

	ಧಾರವಾಡದ ವಿದ್ಯಾವರ್ಧಕ ಸಂಘದ ಸ್ಥಾಪಕರಲ್ಲೊಬ್ಬರಾದ ಇವರು ಆ ಸಂಘದ ಮೊದಲ ಉಪಾಧ್ಯಕ್ಷರಾಗಿಯೂ ಕೆಲಸ ಮಾಡಿದರು. ಇವರು ಶಾಲಾಪತ್ರಿಕೆ ಮತ್ತು ಕರ್ನಾಟಕ ಪತ್ರ ಎಂಬ ಎರಡು ಪತ್ರಿಕೆಗಳನ್ನು ಸ್ವಲ್ಪಕಾಲ ಪ್ರಕಟಿಸಿದರು. ಇವರು 1909 ಮೇ 1ರಂದು ನಿಧನರಾದರು.								
(ವಿ.ಎಸ್.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ